Wednesday, July 13, 2011

ಸಮೀಕರಣ

ಸ್ನೇಹಿತರಾಗಿದ್ದೆವು ಈ ಮೊದಲು
ನಾನೂ ನೀನೂ
ಆದರೆ,

ಈ ಸಂಬಂಧಗಳ ಸಮೀಕರಣ
ಬದಲಾಗಲು ಜಾಸ್ತಿ
ಸಮಯ ಬೇಕಿಲ್ಲ

ಮೊದ ಮೊದಲು ಬಾವಗಳ
ಗುಣಾಕಾರ, ಕನಸುಗಳ ಕೂಡಿ
ಮುಂದಿನ ವಾರ

ಮತ್ತಿನ ತಿಂಗಳಲ್ಲೋಮ್ಮೆ
ಕಳೆದ ಸಮಯ; ನಡುವೆ
ಲೆಕ್ಕಕ್ಕೆ ಸಿಗದೆ ವ್ಯತ್ಯಯ

ಸಣ್ಣ ಪುಟ್ಟ ದಶಾಂಶಗಳೆಲ್ಲಾ
ಸೇರಿ, ಒಟ್ಟಾದ ಮೊತ್ತ
ಮುನಿಸು.

ಈಗಲೂ ಬದಲಾಗುತ್ತಿವೆ
ಸಮೀಕರಣಗಳು
ಮೊದಲಿನಂತೆಯೇ;

ಅಂದು ಕೂಡಿದ್ದೆವು
ಇಂದು ಕಳೆದಿದ್ದೇವೆ
ಅಷ್ಟೇ...!!!

ಮತ್ತೆ ಇನ್ಯಾರೋ ಹೋಸಬರು
ಅದೇ ಹಳೇ ಸಮಿಕರಣಗಳನ್ನು
ಗೀಚುತ್ತಾರೆ,,,

ತಮ್ಮ ಮನದ ಹಾಳೆಯಲ್ಲಿ;
ಏನೋ ಸಾಧಿಸ ಹೊರಟವರಂತೆ
ಹೊಸತಾಗಿ...

ಪಾಪ ! ಅವರಿಗೆನು ಗೊತ್ತು
ಸಂಬಂಧಗಳ ಸಮೀಕರಣ
ಬದಲಾಗುತ್ತಿರುತ್ತದೆಂದು??!!

ಅವರೂ ಅಷ್ಟೇ
ಇಂದು ಕೂಡಿದ್ದಾರೆ
ನಾಳೆ ಕಳೆಯುತ್ತಾರೆ...

Thursday, May 19, 2011

ನೀನೆಂದರೆ

ನೀನೆಂದರೆ ನೆನಪು ಗೆಳತಿ
ಬಾಲ್ಯದ ಸವಿ ಮೆಲುಕು

ನೀನೆಂದರೆ ಕನಸು ಗೆಳತಿ
ನಾಳೆಯ ಬದುಕಿನ ಮಾತು

ನೀನೆಂದರೆ ಮಮತೆ ಗೆಳತಿ
ಅಮ್ಮನ ಸೆರಗಿಗೆ ಉಜ್ಜಿದ ಕಣ್ಣೀರು

ನೀನೆಂದರೆ ಒಲವು ಗೆಳತಿ
ಬರೆಯಲಾಗದ ಕವನ

ನೀನೆಂದರೆ ನಿರೀಕ್ಷೆ ಗೆಳತಿ
ಕಣ್ಣಿನಂಚಿನ ಕಾಮನೆ

ನೀನೆಂದರೆ ಬದುಕು ಗೆಳತಿ
ಅನಿರೀಕ್ಷಿತ ಹಾದಿಯ ತಿರುವು

ನೀನೆಂದರೆ ಕಡಲು ಗೆಳತಿ
ಅಮೃತ ಅಲೆಗಳ ಒಡಲು


Tuesday, March 29, 2011ಉಮ್ಮಳಿಸುತ್ತವೆ ಬಾವಗಳು
ಒಮ್ಮೊಮ್ಮೆ ತಡೆಯಲಾಗದಂತೆ

ಮತ್ತೋಮ್ಮೆ ತದವರಿಸುತ್ತದೆ
ಪದಗಳಾಗದಂತೆ

ಎಲ್ಲವನೂ ಹೇಳಿಬಿಡುತ್ತದೆ
ಕಣ್ಣು ಬಚ್ಚಿಡಲಾಗದೆ

ಪದಗಳಿಗೊಂದು ರಾಗ ಸಿಗದೆ
ಕಮರುತ್ತದೆ ಬಯಕೆಗಳು

ಕಂಠದಲ್ಲೇ ಅಸುನೀಗುತ್ತದೆ
ರಾಗಗಳು ಹಾಡಲಾಗದಂತೆ

ಯಾವುದು ಸ್ಥಾಯೀ?
ಮೌನವೋ ರಾಗವೋ?

ಹಾಳೆಯ ಮೇಲಿನ ಪದಗಳು
ಮುಕ್ತಿಗಾಗಿ ಕಾದಿವೆ

ಹಾಡು ಹಕ್ಕಿಯ ಕಂಠದ ಇಂಪು
ಶೃತಿಯ ಮರೆತು ಕುಳಿತಿದೆ.

ರಾತ್ರಿ ರಾಣಿ ಅರಳುತ್ತದೆ
ಚಂದಿರನ ಮೆಲುನಗೆಗೆ

ಬೆಳದಿಂಗಳ ಹೊದಿಕೆ
ಹೊರೆಯಾಗುತ್ತದೆ ಮೌನ

ರೆಪ್ಪೆಗಳೆಡೆಯಲ್ಲೇ ಅವಿತಿದೆ
ಕನಸು ಮತ್ತೆ ಹುಟ್ಟಲು

ನಿರೀಕ್ಷೆಯಿಲ್ಲದ ಕಣ್ಣ
ಮುಚ್ಚಲೇಕೋ ಒಲ್ಲೆ

ದಿಟ್ಟಿಸುತ್ತಲಿ ಹೊಳೆವ ತಾರೆಗಳ
ಕಣ್ಣಂಚಲಿ ಉಲ್ಕಾಪಾತ

ವೇದನೆ ನೀವೇದನೆ
ಎಲ್ಲಾ ಮಾಫಿ

ನಿದಿರೆಯ ತೆಕ್ಕೆಗೆ ಜಾರಿದಂತೆಲ್ಲಾ
ನೆಮ್ಮದಿಯ ರಾತ್ರಿ.

Wednesday, September 2, 2009

ಹೆಜ್ಜೆ ಗುರುತುಗಳು


ಒದ್ದೆ ಮರಳ ಮೇಲಣ
ಹೆಜ್ಜೆ ಗುರುತುಗಳು
ಎಷ್ಟು ಕಾಲ ಇರಬಹುದು?!

ಕಡಲ ಅಲೆಗಳ
ಸಣ್ಣ ಹೊಡೆತಕ್ಕೇ
ಅಳಿಸಿ ಹೋಗಬಹುದು

ಮರಳ ಮೇಲಣ
ಹೆಜ್ಜೆ ಗುರುತುಗಳು
ಅಲೆಗಳ ಮರ್ಜಿಗೆ
ಕಟ್ಟು ಬಿದ್ದಿವೆ

ಆದರೆ...

ಮನದ ಮೇಲಣ
ಹೆಜ್ಜೆ ಗುರುತುಗಳು
ಅವಕ್ಕೆ ಯಾರ ಹಂಗಿವೆ?!

ಒಮ್ಮೆ ಒಡ ಮೂಡಿದರೆ ಸಾಕು
ಅಳಿಸಲಾಗದ ಗುರುತು
ತನ್ನ ಇರುವನ್ನು
ಮರೆಯಗೊಡದು

ಎಂದೋ ಸವೆಸಿದ ಹಾದಿಯ
ಸವಿ ನೆನಪಾಗಿ ಉಳಿದೇ ಬಿಡುತ್ತದೆ
ಎದೆಯಾಳದಲೆಲ್ಲೋ..

ಯಾರೋ ಅಪರಿಚಿತರು
ನಮ್ಮವರಾಗಿ ಇಟ್ಟ ಹೆಜ್ಜೆ
ಕಾಡುತ್ತದೆ, ಅವರಿಗೆ
ವಿದಾಯ ಹೇಳಿದ ನಂತರವೂ

ಹೃದಯ ಕಾಯುತ್ತದೆ
ಆ ಅಲೆಗಳಿಗಾಗಿ
ಎದೆಯ ಮೇಲಣಹೆಜ್ಜೆ ಗುರುತುಗಳ
ಅಳಿಸುವ ಸಲುವಾಗಿ

ಕಡಲ ತಡಿಯ
ಹೆಜ್ಜೆಗಳು
ಅಳಿಸಿದಂತೆಲ್ಲಾ
ಹೊಸಾ ಹೆಜ್ಜೆಗಳು
ಮತ್ತೆ ಮರಳ ಮೇಲೆ
ಚಿತ್ತಾರ ಮೋಡಿಸುತದೆ

ಮರಳ ಮೇಲಣ
ಹೆಜ್ಜೆ ಗುರುತುಗಳು
ಮತ್ತೆ ನೆನಪ ಕೆದಕುತ್ತದೆ...

Saturday, August 22, 2009

ಆಷಾಡದ ಹೈಕುಗಳು

ಚಂದಿರನಿಲ್ಲದ ಇರುಳು
ಆಷಾಡದ ಗಾಳಿ
ನಿಟ್ಟುಸಿರು.


ನೀನಿಲ್ಲದೆ
ಬೆಳದಂಗಳು
ಉರಿಬಿಸಿಲು.


ಆಷಾಡದಿರುಳು
ಮೇಘಗಳ ಮರೆಯಲ್ಲಿ ಚಂದ್ರ
ಧರೆಗೆ ವಿರಹ.


ಆಷಾಡದ ಮಳೆಹನಿ
ಪ್ರೆಮಿಗಳ
ಕಂಬನಿ.


ಹುಣ್ಣಿಮೆಯ ರಾತ್ರಿ
ಒಂಟಿ ಚಂದಿರನಿಗೆ ಜೊತೆಯಾಗಲು
ಮೇಘಗಳ ಪೈಪೋಟಿ.


ವಸಂತದಿರುಳು
ರಾತ್ರಿರಾಣಿ ಅರಳಲು
ಚಂದ್ರೋದಯ.


ಹೂವು ಅರಳಿದಾಗ
ಮೊಡಿದ ಬಾವ
ಪ್ರೇಮ.


ನನ್ನವಳು ನಗಲು
ಬೆಳದಿಂಗಳ ಬೆಳಗು
ಚಂದಿರನಿಗೆ ಅಸೂಯೆ.

Tuesday, July 14, 2009

ಅಪರಿಚಿತರು

ಕತ್ತಲಲ್ಲಿ ಕರಗುವಾಗ
ನನ್ನಲ್ಲೇ ನಾ ಮರುಗುವಾಗ
ನಿನ್ನದೇ ನೆನಪು

ಅತ್ತು ಸಾಕಾದಾಗ
ಕಣ್ಣೊರಸಿ ನಕ್ಕಾಗ
ನಿನ್ನದೇ ನಗು


ದುಃಖಗಳ ಮರೆತಾಗ
ಸಂತಸದಿ ನಲಿದಾಗ
ನೀನೇ ಜೊತೆ

ಹೊತ್ತು ಕೊಲ್ಲುವಾಗ
ಏಕಾಂತವನು ಗೆಲ್ಲುವಾಗ
ನಿನ್ನದೇ ಮುಖ

ಕಷ್ಟವನು ಗೆದ್ದಾಗ
ಸಾರ್ಥಕಥೆಯ ಪಡೆದಾಗ
ನಿನ್ನದೇ ಹೆಸರು

ಮೌನವ ಮರೆತಾಗ
ಮಾತಿನ ಸವಿ ದೊರೆತಾಗ
ನಿನ್ನದೇ ನುಡಿ

ಮಳೆಯಲಿ ತೊಯ್ದಾಗ
ಕಣ್ಣಂಚು ನೆನೆದಾಗ
ನಿನೇ ಹನಿ

ಗೆಳೆತನ ಮುರಿದಾಗ
ನೀ ನನ್ನ ಮರೆತಾಗ
ನೀನೆಷ್ಟು ದೂರ !

ಮತ್ತೆ ನೀ ಸಿಕ್ಕಾಗ
ಕಣ್ಣುಗಳು ಬೆರೆತಾಗ
ಅಪರಿಚಿತ ಸ್ನೇಹ !!