
ಮರದ ಚೌಕಟ್ಟೊಳಗೆ
ಮರೆಯದ ಚಿತ್ರ
ಬಣ್ಣ ಬಣ್ಣಗಳ ಚಿತ್ತಾರ
ಕಲಾವಿದನ ಕೈಚಳಕ
ಒಂದೊಂದು ಆಯಾಮದಲೂ
ಒಂದೊಂದು ರೂಪ
ಕೆಂಪು, ನೀಲಿ, ಹಸಿರು, ಬಿಳಿ
ವಿವಿಧ ಬಣ್ಣಗಳ ಲೋಕ
ಅಗೋ ಅಲ್ಲಿ ವ್ರದ್ಧನೊಬ್ಬ
ಕೆಕ್ಕರಿಸಿ ನೋಡುತಿಹ
ಇಲ್ಲ ಅಲ್ಲಿರುವುದು
ಎಳೆ ಹಸುಳೆಯ
ಮುಗ್ಧ ಮಂದಹಾಸ
ಕಲಾವಿದನಿಗೇ ಅಚ್ಚರಿ
ಅವನು ಮೂಡಿಸಿದ ಮುಖಗಳ ರೀತಿ
ಎಷ್ಟೊಂದು ಮುಖಗಳು
ಒಂದೇ ಫ್ರೇಮಿನೊಳಗೆ?!
ನಗು, ಅಳು, ದ್ವೇಷ,
ಅಸೂಯೆ, ಸ್ವಾರ್ಥ, ತ್ಯಾಗ
ಎಲ್ಲದಕ್ಕೂ ಒಂದೊಂದು ಮುಖ
ಈ ಮುಖವಾಡದ ಸಂತೆಯಲ್ಲಿ
ಎಲ್ಲರನೂ ಗೆದ್ದವನು
ತನ್ನಲ್ಲೇ ಸೋತವನು
ನಾಚಿ ಮರೆಯಾದವನು
ಭಾವನೆಗಳಿಗೊಂದೊಂದು ಮುಖ
ಧ್ಯಾನಿ, ಮೌನಿ, ಯೋಗಿ
ತ್ಯಾಗಿ, ಭೋಗಿ, ರೋಗಿ
ಎಲ್ಲರ ಮುಖಗಳು ಕಾಯುತ್ತಿವೆ ಇಲ್ಲಿ
ಕಳೆದುಹೋದ ನಿನ್ನೆಯ ನೆನಪಲ್ಲಿ
ನಾಳೆಯ ನಿರೀಕ್ಷೆಯಲ್ಲಿ
ಎಲ್ಲಾ ಭಾವನೆಗಳ ಬಂಧಿಸಿದ
ಗಾಜಿನ ಆವರಣದ ಮೇಲೆ
ನೋಡುಗನದೇ ಮುಖದ ಪ್ರತಿಫಲನ.