Saturday, November 29, 2008

ನದಿ ಮತ್ತು ನೆನಪು





ಜಿಟಿ ಜಿಟಿ ಮಳೆ

ರಸ್ತೆಯೆಲ್ಲಾ ಕೆಸರು ಕೊಚ್ಚೆ

ಮನಸ್ಸೆಲ್ಲಾ ರಾಡಿ

ಯರೋ ಹೇಳಿದ ನೆನಪು

ನದಿಗೆ ನೆನಪಿನ

ಹಂಗಿಲ್ಲವಂತೆ

ಮಳೆಗಾಲದಲ್ಲಿ ತುಂಬಿದ

ಹರಿವು ನದಿಗೆ

ನೋವು ನಲಿವೆಲ್ಲಾ ಒಂದೇ



ಸೆಳೆವಲ್ಲಿ ಕೊಚ್ಚಿ ಹೋದ

ಕನಸುಗಳು ಇನ್ನೂ

ಕನಸುಗಳಾಗಿಯೇ ಉಳಿದಿವೆ



ಸುಳಿಗೆ ಸಿಕ್ಕಿ ಮುಳುಗಿದ

ಮನಸುಗಳು

ಯಾರ ಲೆಕ್ಕಕ್ಕೂ ಸಿಕ್ಕಿಲ್ಲ



ನೆನಹುಗಳಿಂದ ತೊಯ್ದ

ತಟಗಳಲ್ಲಿ ಇನ್ನೂ

ಯರೋ ಕುಳಿತಿರುವಂತೆ..




ನಿಜ, ನದಿಗೆ ನೆನಪಿನ

ಹಂಗಿಲ್ಲ, ಆದರೆ;

ನನಗೂ ನಿನಗೂ ಇದೆ.



ಕಡಲ ಸೇರಿ ಸಿಹಿ ನೀರು

ಉಪ್ಪದಾರೂ, ಮುಪ್ಪಾದರೂ

ನೆನಪು ಚಿರಂಜೀವಿ



ನೆನೆವ ಮನದಲ್ಲಿ

ಮುಚ್ಚಿದ ರೆಪ್ಪೆಗಳೆಡೆಯಲ್ಲಿ

ನದಿ ಹರಿಯುತ್ತಲೇ ಇದೆ.



ನದಿಗೆ ನೆನಪಿನ ಹಂಗಿಲ್ಲ, ನಿಜ

ಆದರೆ...



Wednesday, November 5, 2008

ಜೀವ ರಸಾಯನ ಶಾಸ್ತ್ರ ವಿಭಾಗದಿಂದ


ಊರಿಂದ ದೂರ, ಬೆಟ್ಟದ ಮೇಲೆ

ನಮ್ಮ ಜೀವ ರಸಾಯನ ಶಾಸ್ತ್ರ ವಿಭಾಗ

ಬುಡವಿಲ್ಲ, ತುದಿಯಿಲ್ಲ

ಕಟ್ಟಿದ್ದು ಯಾರೋ ಸರಿಯಾಗಿ ಗೊತ್ತಿಲ್ಲ!


ಪ್ರಯೋಗ ಶಾಲೆಯ ಮುಲೆ ಮುಲೆಗಳೊಳಗೆ

ಸಹಬಾಳ್ವೆ ನಡೆಸುತ್ತಿರುವ

ಹಳೆಯ ಶತಮಾನಗಳಿನ್ನೂ

ಉಸಿರಾಡುತ್ತಿವೆ


ಒಮ್ಮೆ ಹೊಕ್ಕಿರೆಂದರೆ

ಆ ಸರಳುಗಳಿನಂದಾಚೆ

ಹೊಸತೊಂದು ಆಯಾಮ

ಅನಾವರಣಗೊಳ್ಳುವ ಬದುಕು

ನಿಜಕ್ಕೂ ವಾಸ್ತವವೊಂದು ಒಗಟು


ಎಲ್ಲೋ ಕಾಡಲ್ಲಿ

ಬಂಡೆಗಳ ಮೇಲೆ ಬೆಳೆದ

ಬಾನ್ಸಾಯಿಗಳೆಲ್ಲಾ

ಇಲ್ಲಿ ತಳವೂರಿ ಹೆಮ್ಮರಗಳಾಗಿ

ಆಗಸಕೆ ಚಾಚಿವೆ.


ಅವರಂತಾಗುವ ಆಸೆ ನಮಗೂ

ಆದರೆ, ಅಪರಿಚತೆಯ

ನೀರವ ಮೌನ ಕೆಣಕುತ್ತದೆ

ಅರಿಯದಕ್ಕೆ ಅಂಜುವುದೇ

ಮಾನವ ಗುಣ


ಎಷ್ಟು ಅಂಕು ಡೊಂಕಾಗಿ

ದಾರಿ ತಪ್ಪಿಸಿ ನಡೆದರೂ

ಬೆನ್ನಟ್ಟುತ್ತದೆ

ಕಣ್ಣಿನಂಚಿಂದಲೇ

ಕೆಣಕುತ್ತದೆ

ಮನದ ತಿಳಿಕೊಳವನ್ನು

ಕದಡುತ್ತದೆ.


ಇನ್ನು ಮೇಲಲ್ಲಿಗೆ

ಹೊಗುವುದೇ ಇಲ್ಲವೆಂದುಷ್ಟೋ ಬಾರಿ

ಅಂದುಕೊಳ್ಳುತ್ತೇನೆ


ಆದರೇನು?!


ಭಯವ ಗೆಲ್ಲುವ ತವಕ

ಅಂಜಿಕೆಯನ್ನೇರಿ ಸಾಗುತ್ತದೆ

ಅದ ಗೆದ್ದಾಗಲೇ ಸತ್ಯದ

ಹೊಸತೊಂದು ಮಜಲು

ಕಾಣುತ್ತದೆ


ಮಸುಕಾದ ಹಾದಿಯಲ್ಲಿ

ಜಾರಿದಾಗ ಬೀಳದಂತೆ

ಹಿಡಿಡೆತ್ತಲುಎಷ್ಟೊಂದು ಕೈಗಳು


ನಗುವ ಹೂಗಳು

ಹಾಡುವ ಗೀತೆಯ ನಾದಕ್ಕೆ

ನಾವೂ ಅರಳಬೇಕು

ಮುಂದೆ ಅವರ ಜಾಗಕ್ಕೆ ನಾವೂ

ನಮ್ಮ ಜಾಗಕ್ಕೆ ಇನ್ಯಾರೋ....

ಬದುಕು ಹಿಗೇ ಸಾಗಬೇಕು.