Saturday, October 18, 2008

ಹಾಡು ಹಕ್ಕಿ

ಇಂದೇಕೆ ಮೌನ ಹಾಡು ಹಕ್ಕಿ
ಮರೆತೆಯೇನು ಹಾಡನು?!
ಭಾವ ತುಂಬಿ ಬರೆದ ಕವಿಯ
ಎದೆಯ ಮಿಡಿತದ ಸಾಲನು

ನಿನ್ನ ದಿವ್ಯ ಮೌನದೊಡನೆ
ಮರೆಯಾಯ್ತು ಎಲ್ಲಾ ರಾಗವು
ಮುಡದಾಯಿತು ಕವಿತೆಯು
ನಾದವಿರದ ಅನಾಥ ಜಗವು
ನಿನ್ನ ದನಿಗೆ ಕಾದಿದೆ

ಬಿಟ್ಟು ಬಾರೆ ಭಯದ ಗೂಡ
ರೆಕ್ಕೆ ಬಿಚ್ಚಿ ಹಾರು ಬಾ
ಸಹ್ಯಾದ್ರಿ ಸಾಲ ಹಸಿರಿನಲ್ಲಿ
ನಿನ್ನ ಉಸಿರ ಸೇರಿಸಿ
ಏರಿಳಿತದ ಪ್ರಕೃತಿಗೊಂದು
ರಾಗಹಚ್ಚಿ ಹಾಡು ಬಾ

ಅಭಿಮಾನಿ ಹೃದಯ ನಿನಗೆ
ಹಲವು ಕಾತರದಿ ಕಾದಿವೆ
ಕರುಣೆ ತೋರಿ ಬರಡು ಮನಕೆ
ಗಾನಸುಧೆಯ ಹರಿಸು ಬಾ
ನಮಗಾಗಿ ಒಮ್ಮೆ ಹಾಡು ಬಾ.

Saturday, October 4, 2008

ಸಂಕೋಲೆ



ಭಾವನೆಗಳ ಗರಿಗೆದರಿ

ಮುಕ್ತತೆಯ ಮತ್ತೇರಿ

ಕನಸಿನ ಬೆನ್ನೇರಿ

ಹಾರಲು ಸಿದ್ದ


ಮತ್ತೇನೋ ಸೆಳೆತ

ನೆನಪಿನ ಬೇರು

ಭೂಮಿಗೆ ಬಂದಿತ

ಕರ್ತವ್ಯಕೆ ಅಂಜುವೆಯೇಕೆ?


ಏಕಾಂತವು ತೇಲುವ ಮೇಘ

ದು:ಖವು ಕರಗುವ ಆವಿ

ಮಿಂಚಿ ಗುಡುಗುವ ಬುದ್ದಿ

ಕಣ್ಣೀರ ಹನಿಮಳೆ

ಕಡಲ ಸೇರುವ ದಿನವೆಂದೋ?!


ಸ್ವಾತಂತ್ರ್ಯ ಮಾರುತದಿ

ತೇಲುವ ಮನ, ತಡೆ ಅರೆ ಕ್ಷಣ

ಮಣ್ಣಿನ ವಾಸನೆಯ ಮರೆಯುವುದೆಂತು?


ಪ್ರೀತಿ, ವಾತ್ಸಲ್ಯ,ಬಾಂದವ್ಯ,ಜವಾಬ್ದಾರಿ, ವಿಶ್ವಾಸ

ಬಾವನೆಗಳೇ ಕೊಂಡಿಗಳು

ಹುಚ್ಚು ಮನಸ್ಸಿಗೆ ತೊಡರುವ ಸಂಕೋಲೆಗೆ.