Monday, May 19, 2008

ಪ್ರಯೋಗ

ತಿಳಿದಿರಲಿ ನಿಮಗೆ
ನಾವಿರುವುದು
ಪ್ರಯೋಗ ಶಾಲೆಯಲ್ಲಿ
ಇಲ್ಲಿ ದಯೆಗೆ ದಾರಿಯಿಲ್ಲ

ಆಗಷ್ಟೇ ಹುಟ್ಟಿ , ತೆವಳಿ
ಪ್ರಪಂಚ ನೋಡುವ
ತವಕದಿ ತಲೆಯೆತ್ತಿದಗೆಲ್ಲಾ
ಕತ್ತನ್ನೇ ಕೊಯ್ಯುತ್ತಾರೆ
ತುದಿಗೊಂದು ಬುಡಕೊಂದು
ಸೂಜಿ ಚುಚ್ಚಿ,ಎಳೆದಾಡಿ
ಅಲ್ಕೊಹಾಲ್,ಆಸಿಡ್ ಹಾಕಿ
ಬೇಕಾದ ಬಣ್ಣ ಹಚ್ಚಿ
ಭೂತ ಕನ್ನಡಿಯಲಿ
ಕಣ್ಣಿಕ್ಕಿ ನೋಡುತ್ತಾರೆ
ಹೊಸತ್ತೆನನ್ನೋ ಹುಡುಕುವಂತೆ.
ಗೊತ್ತಿತ್ತೇ ನಿಮಗೆ?
ನಿಮ್ಮೊಳಗೂ ಅಮೂಲ್ಯವಾದ್ದದೇನೋ
ಇದೆಯೆಂದು!

ಈ ಬುದ್ದಿಜೀವಿಗಳ ಕಣ್ಣುತಪ್ಪಿಸಿ
ಹಾಗೋ ಹೀಗೋ ಬದುಕಿ;ಬೆಳೆದು
ಹಾರಲು ಹೊರಟರೆ
ಹಿಡಿದೇ ಹಿಡಿಯುತ್ತಾರೆ.
ತುಂಡು ತುಂಡಾಗಿ ಕಡಿಯುತ್ತಾರೆ.
ನಿಮ್ಮೊಳಗಿಂದ ನಿಮ್ಮನ್ನೇ
ಕದಿಯುತ್ತಾರೆ.
ಇಷ್ಟೇಲ್ಲಾ ಆದರೂ
ನಿಮ್ಮ ಛಲ ನಿಮಗೆ
ಒಬ್ಬ ಸತ್ತರೆ, ಮತ್ತೊಬ್ಬ,
ಮಗದೊಬ್ಬ,ಹೀಗೆ...
ಅವಿರತ ಪ್ರಯತ್ನ


ಅರೆ! ಇನ್ನೂ ತಿಳಿಯಲಿಲ್ಲವೆ ನಿಮಗೆ
ಇದೊಂದು ಪ್ರಯೋಗಶಾಲೆ
ಇಲ್ಲಿ ದಯೆಗೆ ದಾರಿಯಿಲ್ಲ.

Thursday, May 1, 2008

ಕೆಲವು ಹನಿಗಳು

ಪುಸ್ತಕದ ಖಾಲಿ ಹಾಳೆಗಳ ನಡುವೆ
ಒಣಗಿದ ಗುಲಾಬಿ ಮೊಗ್ಗು
ಅರಳಿದೆ ಮನ


ಮಳೆಗಾಲದ ಸಂಜೆ
ಕಣ್ಣೀರಲ್ಲೂ
ಕಾಮನಬಿಲ್ಲು


ನೀಳ ಜಡೆಯ ಮೇಲೆ
ಕನಕಾಂಬರದ ಕಂಪು
ಕಾಣದ ಕೆನ್ನೆಯ ಮೇಲೆ
ಕಂಬನಿ ಇಳಿದಿದೆ



ರೊಮಾಂಚನದ ಸಂಜೆ
ಮಾತು ಮುರಿದ ಹುಡುಗಿ
ಕಣ್ಣಲ್ಲೇ ಮಾತಾಗುತ್ತಾಳೆ.



ಬೀಸಿದೆ ಗಾಳಿ
ಬೆಳಕ ಹಿಡಿದ ಕೈಗೆ
ಮುಗಿದ ತೈಲದ
ಅರಿವೇ ಇಲ್ಲ