Wednesday, September 2, 2009

ಹೆಜ್ಜೆ ಗುರುತುಗಳು


ಒದ್ದೆ ಮರಳ ಮೇಲಣ
ಹೆಜ್ಜೆ ಗುರುತುಗಳು
ಎಷ್ಟು ಕಾಲ ಇರಬಹುದು?!

ಕಡಲ ಅಲೆಗಳ
ಸಣ್ಣ ಹೊಡೆತಕ್ಕೇ
ಅಳಿಸಿ ಹೋಗಬಹುದು

ಮರಳ ಮೇಲಣ
ಹೆಜ್ಜೆ ಗುರುತುಗಳು
ಅಲೆಗಳ ಮರ್ಜಿಗೆ
ಕಟ್ಟು ಬಿದ್ದಿವೆ

ಆದರೆ...

ಮನದ ಮೇಲಣ
ಹೆಜ್ಜೆ ಗುರುತುಗಳು
ಅವಕ್ಕೆ ಯಾರ ಹಂಗಿವೆ?!

ಒಮ್ಮೆ ಒಡ ಮೂಡಿದರೆ ಸಾಕು
ಅಳಿಸಲಾಗದ ಗುರುತು
ತನ್ನ ಇರುವನ್ನು
ಮರೆಯಗೊಡದು

ಎಂದೋ ಸವೆಸಿದ ಹಾದಿಯ
ಸವಿ ನೆನಪಾಗಿ ಉಳಿದೇ ಬಿಡುತ್ತದೆ
ಎದೆಯಾಳದಲೆಲ್ಲೋ..

ಯಾರೋ ಅಪರಿಚಿತರು
ನಮ್ಮವರಾಗಿ ಇಟ್ಟ ಹೆಜ್ಜೆ
ಕಾಡುತ್ತದೆ, ಅವರಿಗೆ
ವಿದಾಯ ಹೇಳಿದ ನಂತರವೂ

ಹೃದಯ ಕಾಯುತ್ತದೆ
ಆ ಅಲೆಗಳಿಗಾಗಿ
ಎದೆಯ ಮೇಲಣಹೆಜ್ಜೆ ಗುರುತುಗಳ
ಅಳಿಸುವ ಸಲುವಾಗಿ

ಕಡಲ ತಡಿಯ
ಹೆಜ್ಜೆಗಳು
ಅಳಿಸಿದಂತೆಲ್ಲಾ
ಹೊಸಾ ಹೆಜ್ಜೆಗಳು
ಮತ್ತೆ ಮರಳ ಮೇಲೆ
ಚಿತ್ತಾರ ಮೋಡಿಸುತದೆ

ಮರಳ ಮೇಲಣ
ಹೆಜ್ಜೆ ಗುರುತುಗಳು
ಮತ್ತೆ ನೆನಪ ಕೆದಕುತ್ತದೆ...