Wednesday, September 2, 2009

ಹೆಜ್ಜೆ ಗುರುತುಗಳು


ಒದ್ದೆ ಮರಳ ಮೇಲಣ
ಹೆಜ್ಜೆ ಗುರುತುಗಳು
ಎಷ್ಟು ಕಾಲ ಇರಬಹುದು?!

ಕಡಲ ಅಲೆಗಳ
ಸಣ್ಣ ಹೊಡೆತಕ್ಕೇ
ಅಳಿಸಿ ಹೋಗಬಹುದು

ಮರಳ ಮೇಲಣ
ಹೆಜ್ಜೆ ಗುರುತುಗಳು
ಅಲೆಗಳ ಮರ್ಜಿಗೆ
ಕಟ್ಟು ಬಿದ್ದಿವೆ

ಆದರೆ...

ಮನದ ಮೇಲಣ
ಹೆಜ್ಜೆ ಗುರುತುಗಳು
ಅವಕ್ಕೆ ಯಾರ ಹಂಗಿವೆ?!

ಒಮ್ಮೆ ಒಡ ಮೂಡಿದರೆ ಸಾಕು
ಅಳಿಸಲಾಗದ ಗುರುತು
ತನ್ನ ಇರುವನ್ನು
ಮರೆಯಗೊಡದು

ಎಂದೋ ಸವೆಸಿದ ಹಾದಿಯ
ಸವಿ ನೆನಪಾಗಿ ಉಳಿದೇ ಬಿಡುತ್ತದೆ
ಎದೆಯಾಳದಲೆಲ್ಲೋ..

ಯಾರೋ ಅಪರಿಚಿತರು
ನಮ್ಮವರಾಗಿ ಇಟ್ಟ ಹೆಜ್ಜೆ
ಕಾಡುತ್ತದೆ, ಅವರಿಗೆ
ವಿದಾಯ ಹೇಳಿದ ನಂತರವೂ

ಹೃದಯ ಕಾಯುತ್ತದೆ
ಆ ಅಲೆಗಳಿಗಾಗಿ
ಎದೆಯ ಮೇಲಣಹೆಜ್ಜೆ ಗುರುತುಗಳ
ಅಳಿಸುವ ಸಲುವಾಗಿ

ಕಡಲ ತಡಿಯ
ಹೆಜ್ಜೆಗಳು
ಅಳಿಸಿದಂತೆಲ್ಲಾ
ಹೊಸಾ ಹೆಜ್ಜೆಗಳು
ಮತ್ತೆ ಮರಳ ಮೇಲೆ
ಚಿತ್ತಾರ ಮೋಡಿಸುತದೆ

ಮರಳ ಮೇಲಣ
ಹೆಜ್ಜೆ ಗುರುತುಗಳು
ಮತ್ತೆ ನೆನಪ ಕೆದಕುತ್ತದೆ...

Saturday, August 22, 2009

ಆಷಾಡದ ಹೈಕುಗಳು

ಚಂದಿರನಿಲ್ಲದ ಇರುಳು
ಆಷಾಡದ ಗಾಳಿ
ನಿಟ್ಟುಸಿರು.


ನೀನಿಲ್ಲದೆ
ಬೆಳದಂಗಳು
ಉರಿಬಿಸಿಲು.


ಆಷಾಡದಿರುಳು
ಮೇಘಗಳ ಮರೆಯಲ್ಲಿ ಚಂದ್ರ
ಧರೆಗೆ ವಿರಹ.


ಆಷಾಡದ ಮಳೆಹನಿ
ಪ್ರೆಮಿಗಳ
ಕಂಬನಿ.


ಹುಣ್ಣಿಮೆಯ ರಾತ್ರಿ
ಒಂಟಿ ಚಂದಿರನಿಗೆ ಜೊತೆಯಾಗಲು
ಮೇಘಗಳ ಪೈಪೋಟಿ.


ವಸಂತದಿರುಳು
ರಾತ್ರಿರಾಣಿ ಅರಳಲು
ಚಂದ್ರೋದಯ.


ಹೂವು ಅರಳಿದಾಗ
ಮೊಡಿದ ಬಾವ
ಪ್ರೇಮ.


ನನ್ನವಳು ನಗಲು
ಬೆಳದಿಂಗಳ ಬೆಳಗು
ಚಂದಿರನಿಗೆ ಅಸೂಯೆ.

Tuesday, July 14, 2009

ಅಪರಿಚಿತರು

ಕತ್ತಲಲ್ಲಿ ಕರಗುವಾಗ
ನನ್ನಲ್ಲೇ ನಾ ಮರುಗುವಾಗ
ನಿನ್ನದೇ ನೆನಪು

ಅತ್ತು ಸಾಕಾದಾಗ
ಕಣ್ಣೊರಸಿ ನಕ್ಕಾಗ
ನಿನ್ನದೇ ನಗು


ದುಃಖಗಳ ಮರೆತಾಗ
ಸಂತಸದಿ ನಲಿದಾಗ
ನೀನೇ ಜೊತೆ

ಹೊತ್ತು ಕೊಲ್ಲುವಾಗ
ಏಕಾಂತವನು ಗೆಲ್ಲುವಾಗ
ನಿನ್ನದೇ ಮುಖ

ಕಷ್ಟವನು ಗೆದ್ದಾಗ
ಸಾರ್ಥಕಥೆಯ ಪಡೆದಾಗ
ನಿನ್ನದೇ ಹೆಸರು

ಮೌನವ ಮರೆತಾಗ
ಮಾತಿನ ಸವಿ ದೊರೆತಾಗ
ನಿನ್ನದೇ ನುಡಿ

ಮಳೆಯಲಿ ತೊಯ್ದಾಗ
ಕಣ್ಣಂಚು ನೆನೆದಾಗ
ನಿನೇ ಹನಿ

ಗೆಳೆತನ ಮುರಿದಾಗ
ನೀ ನನ್ನ ಮರೆತಾಗ
ನೀನೆಷ್ಟು ದೂರ !

ಮತ್ತೆ ನೀ ಸಿಕ್ಕಾಗ
ಕಣ್ಣುಗಳು ಬೆರೆತಾಗ
ಅಪರಿಚಿತ ಸ್ನೇಹ !!

Wednesday, May 27, 2009

ಬೊಗಸೆಯಲ್ಲಿ ಮಳೆ



ಹಿಡಿದಿಡಲಾಗದು ಎಕೋ ಎನೋ..

ಬೊಗಸೆಯಲ್ಲಿ ಮಳೆಯನ್ನು


ಕಣ್ಣಲ್ಲೇ ತುಂಬಿಕೊಳ್ಳುತ್ತೇನೆ

ಮಳೆಗಾಲದ ಆ ದಿನಗಳ


ಮತ್ತೆ ಮಳೆ ಬರಲು

ಕಂಬನಿಗಿಲ್ಲ ಯಾವ ಅಣೆಕಟ್ಟೂ


ಜಾರುತ್ತದೆ ಮಳೆ ಹನಿ

ಕೆನ್ನೆ ಮೇಲೆ, ಬೆಚ್ಚಗೆ


ಈ ಬಾರಿಯ ಮೊದಲ ಮಳೆ

ಮಣ್ಣ ಕಂಪ ಜೊತೆಗೆ ತಂದಿದೆ..


ಬದುಕು ಬೆದರುತ್ತದೆ

ನೆನಪ ಹನಿಗಳಿಗೆ


ನೆಲಕೆ ತಾಕದಂತೆ ಆ ಹನಿಗಳು

ಮತ್ತೆ ಕೈ ಚಾಚುತ್ತೆನೆ


ತಿಳಿದಿದೆ ನನಗೆ, ಬೊಗಸೆಯಲ್ಲಿ

ಮಳೆಯನ್ನು ಹಿಡಿದಿಡಲಾಗದೆಂದು


ಆದರೂ ಬೊಗಸೆಯೊಡ್ಡುತ್ತೇನೆ

ಏಕೋ, ಏನೋ..?!!

Wednesday, April 15, 2009

ಮೌನರಾಗ


ಮೊನ್ನೆ ಸಿಕ್ಕ ಗೆಳತಿ

ಕವಿತೆಯೊಂದ ಹೆಕ್ಕಿ

ಹಾಡಲು ನಾಚಿ ಮೌನವಾದಳು

ಮೌನರಾಗ ಎನಿತು ಇಂಪು!!!

Thursday, April 9, 2009

ಪ್ರತಿಫಲನ

ಮುಂಜಾನೆಯ ಇಬ್ಬನಿ
ಕಣ್ಣಂಚಿನ ಕಂಬನಿ
ಕಣ್ಣೇರಿಗೆ ಕಾರಣಗಳೆಷ್ಟು?


ನಿರೀಕ್ಶೆಯ ಹೊಸ ಕಿರಣ
ಪ್ರತಿಫಲಿತ ಸಪ್ತವರ್ಣ
ಕನಸಿಗೆ ಬಣ್ಣಗಳೆಷ್ಟು?


ಒಡೆದ ಕನ್ನಡಿಯಲ್ಲಿ ಅದೇ ರೂಪ
ಮತ್ತದೇ ಕನಸಿನ ಪ್ರತಿಫಲನ...

Wednesday, March 18, 2009

ಚೆಲುವಿಗೆ

ಈ ಭುವಿಯೊಳು ಬೇರೇನಿದೆ ನಲ್ಲೆ
ನಿನ್ನ ಚೆಲುವಲ್ಲದೇ..

ಸಂಜೆ ಬಾನ ಹೊನ್ನ ಬಣ್ಣ
ನಲ್ಲೆ ನೀನು ನಾಚಿಯೇ..

ಕೊಗಿಲೇಯ ಗಾನದಿಂಪು
ನಿನ್ನ ಉಸಿರ ರಾಗವೇ

ಮೊಗ್ಗು ಅರಳಿ ಹೂವಾಗಿಹುದು
ನಿನ್ನ ನಗುವ ಕಂಡೊಡೆ

ಇರುಳ ಬಾನ ಮಿನುಗು ತಾರೆ
ಹೊಳೆಯುತಿಹುದು ಕಣ್ಣಲೇ

ಪೂರ್ಣ ಶಶಿಯು ಬೀಗುತಿಹನು
ನಿನ್ನ ಮೊಗದ ಹೊಳಪಲೇ

ಕವಿಯ ಎದೆಯ ಸ್ಪೂರ್ತಿ ಚಿಲುಮೆ
ಗೆಳತಿ ನಿನ್ನ ಚೆಲುವಲೇ...

Wednesday, February 11, 2009

ಗೋಧೂಳಿ

ಮೊಳಗಿದೆ ಚೆಂಡೆ ನಾದ
ಚಿಮ್ಮಿದೆ ಕಾರಂಜಿ.
ಗದ್ದೆಯ ಕೆಸರು ನೀರ
ಕೆಂಬಣ್ಣ ಹೊಳೆಯುತ್ತಿದೆ
ಹೊಸತಾಗಿ,ಹಸನಾಗಿ..

ನೊಗವನೆತ್ತಿ ನಗುವಾಗ
ಬಯಲಲ್ಲಿ ಉಳುವಾಗ
ಪುಣ್ಯಕೋಟಿ ಲವಕುಶರು
ಚೆಂಡೆಯ ಸದ್ದಿಗೇಕೋ
ಬೆದರುತ್ತಾರೆ,
ಓಡುತ್ತಾರೆ ಕೈ ತಪ್ಪಿಸಿ
ಅತ್ತಿತ್ತ ತಿರುಗದೆ
ನೆರವಾಗಿ.
ನನಗೂ ಆವೇಶ,
ಹಿಂದೆಯೇ ನುಗ್ಗುತ್ತೇನೆ
ಕೈಯೆತ್ತಿ..

ಜಾರಿಹೋಗಿದೆ ನೊಗವು
ಬರಡಾಗಿದೆ ಹೊಲವು
ಒಣ ನೆಲದ ಮೇಲೆ
ಬ್ರಹ್ಮಾಂಡದಗಲ
ಗೊರಸ ಗುರುತು.
ಇನ್ನು ಹಿಂತಿರುಗಲೇ ಬೇಕು
ಗೋಧೂಳಿಯ
ಹಣೆಗೆ ಹಚ್ಚಿ.

(ಸೌಂದರ್ಯ ಮತ್ತು ಸತ್ಯ" ಕಂಬಳದ ಬಗೆಗಿನ ಟೆಲಿ ಫಿಲ್ಮ್ ನೋಡಿದಾಗ ಮೋಡಿದ್ದು.)

Saturday, January 17, 2009

ಆಗಸಕೆ ಬಣ್ಣ ಕೊಟ್ಟವನ್ಯಾರೋ?

ಆಗಸಕೆ ಬಣ್ಣ ಕೊಟ್ಟವನ್ಯಾರೋ?
ನೀನ್ಯಾರೋ ಹೇಳು?

ಸಪ್ತವರ್ಣದ ಕನಸು ಕಟ್ಟಿ
ನೀಲಿ ನಭದ ಮೇಲೆ ಹಾರೋ
ಕನಸುಗಾರ ನೀನ್ಯಾರೋ?

ಕಡಲತೆರೆಯ ಮೇಲೆ ಏರಿ
ದಡದ ಮರಳ ಹೊನ್ನ ಮಾಡಿದ
ಸ್ಪರ್ಶಮಣಿ ನೀನ್ಯರೋ?

ಕಲ್ಲುಮಣ್ಣ ರಾಶಿ ಮಾಡಿ
ದಟ್ಟ ಹಸಿರ ಉಸಿರು ತುಂಬಿದ
ಮಾಯಾಶಿಲ್ಪಿ ನೀನ್ಯಾರೋ?

ನನ್ನ ನಿನ್ನ ಭುಮಿಯಲ್ಲಿಟ್ಟು
ಆಗಸದಿ ಶಶಿಯನಿಟ್ಟು
ಬೆಳಕ ಕೊಟ್ಟವನ್ಯಾರೋ?

ನೀನ್ಯಾರೋ ಹೇಳು?
ಆಗಸಕೆ ಬಣ್ಣ ಕೊಟ್ಟವನ್ಯಾರೋ?