Saturday, March 22, 2008

ಮತ್ತೊಂದು ಕವಿತೆ

ಈ ಕವಿತೆಯ ಸಹವಾಸವೇ ಸಾಕು

ಏನೋ ಹೇಳ ಹೋಗಿ

ಇನ್ನೇನೋ ಆಗುವ ಸಾಲುಗಳು

ನೇರ ವಾಕ್ಯವ ತಿರುಚಿ,ಕಿವುಚಿ

ಹೊಸತಾಗಿಸಿ ನೋಡುವ ಪರಿ

ಬೇಡವೇ ಬೇಡ ನನಗಿನ್ನು

ಬರೆದರೆ ಕಥೆಯೇ ಬರೆಯಬೇಕು

ಬದುಕ ಬವಣೆಯನು

ನೀಳವಾಗಿ ಸೆರೆ ಹಿಡಿಯಬೇಕು

ಕಾದಂಬರಿ ಬರೆಯುವಷ್ಟು

ಮಣ್ಣು,ಮಸಿ ನನ್ನ ಲೇಖನಿಯಲಿಲ್ಲ

ಸಣ್ಣ ಕಥೆಯೇ ಸರಿಯೆಂದು

ಪೆನ್ನು ಹಿಡಿದು ಕೂತೆ

ಮಾಸ್ತಿ,ಕಾಯ್ಕಿಣಿ,ಚಿತ್ತಾಲರಂತೆ

ನಾನೂ ಮಾಗಬೆಕೆಂದು

ಮೋಂಡು ಕುಳಿತೆ

ಮತ್ತದೇ ಕನಸು;

ಎನಂದಿನಂತೆ ತಡವಾಗಿ ಬಂದ

ಪ್ಯಾಸೆಂಜರ್ ಟ್ರೈನು,

ಕುಳಿ ಬಿದ್ದ ಕಪ್ಪು ರಸ್ತೆ

ಬಿರ್ರನೆ ತಿರುಗುವ

ಗಡಿಯಾರದ ಮುಳ್ಳು

ಆಸ್ಪತ್ರೆಯ ಘಾಟು

ಬೋಧೀ ವೃಕ್ಷದ ನೆರಳು

ಎಚ್ಚೆತ್ತು ನೋಡಲು

ಖಾಲಿ ಹಾಳೆಯ ಮೇಲೆ

ಮತ್ತೊಂದು ಕವಿತೆ!

Friday, March 7, 2008

ನೋವು



ಹುಣ್ಣಿಮೆಯ ಸ0ಜೆ

ಒಣಗಿದ ಮರದ

ರೆ0ಬೆಗಳು

ಪೂರ್ಣ ಚ0ದಿರನ ಮೇಲೂ

ಬರೆಗಳನ್ನೆಳೆದಿವೆ

Monday, March 3, 2008

ನಗು

ನಾನೇಕೆ ನಗಲಾರೆ ನಿನ್ನಂತೆ ಹೂವೇ
ನನಗೂ ಅರಳುವಾಸೆ
ನಿನ್ನಂತೆ ಚೆಲುವೆ


ನಾನೇಕೆ ನಗಲಾರೆ ನಿನ್ನಂತೆ ಹೂವೇ
ಸಮೃದ್ಧಿಯ ಗಿಡದಲಿ ಅರಳಿದ ಮೊಗ್ಗೇ
ನಿನ್ನ ನಗುವಿನ ಒಡಲಿನ
ಗುಟ್ಟನ್ನು ತಿಳಿಸೇ

ಹೇಗೆ ಅರಳಿದೆ ನೀನು ಮುಳ್ಳುಗಳ ನಡುವೆ
ಹೊಂಚು ಹಾಕಿವೆ ಕೈಗಳು
ಅಪಹರಿಸುವ ಬಯಕೆ

ಇನ್ನೂ ನಗುತಿಹೆಯಾ ನೀನು
ನನ್ನ ಕನಸಿನ ಹಾಗೆ...
ನಾನೇಕೆ ನಗಲಾರೆ ನಿನ್ನಂತೆ ಹೂವೇ

ಪರಿಕ್ರಮಣ


ಹುಡುಕಲೇನು


ಈ ಸಂಜೆಯಲಿ


ಸೂರ್ಯಾಸ್ತದಲಿ


ಅಡಗಿರುವ ವಸ್ತುವ


ಬದುಕಿನ ಸತ್ಯವ


ಉದಯ - ಅಸ್ತಮಾನ


ದೃಶ್ಯ ಒಂದೇ


ದಿಕ್ಕೊಂದೇ ಬೇರೆ


ಕಡಲ ಒಡಲ ಅಲೆಗಳಿಗೆ


ಹೊಂಬಣ್ಣ ಹಚ್ಚಿ


ಶರಧಿಯಲಿ ಮುಳುಗುತ್ತಾನೆ


ದಿನದ ಬೇಗೆ ಕಳೆಯಲು


ಮತ್ತೆ ಏಳುತ್ತಾನೆ


ಹೊಸ ಲವಲವಿಕೆ


ಮತ್ತದೇ ಉತ್ಸಾಹ


ಅದೇ ಹೊಂಬಣ್ಣದಲಿ


ಮಿಂದ ಹೊಸತೊಂದು ದಿನ


ವೇದಾಂತ, ಉಪನಿಷತ್ತುಗಳ


ಹಂಗಿಲ್ಲದೆ


ಆಧ್ಯಾತ್ಮದ ಅರಿವಿಲ್ಲದೇ


ಸಾರುತ್ತಿದೆ...


ಪರಿಕ್ರಮಣವೊಂದೇ


ಚಿರಂತನ ಸತ್ಯ