Saturday, March 22, 2008

ಮತ್ತೊಂದು ಕವಿತೆ

ಈ ಕವಿತೆಯ ಸಹವಾಸವೇ ಸಾಕು

ಏನೋ ಹೇಳ ಹೋಗಿ

ಇನ್ನೇನೋ ಆಗುವ ಸಾಲುಗಳು

ನೇರ ವಾಕ್ಯವ ತಿರುಚಿ,ಕಿವುಚಿ

ಹೊಸತಾಗಿಸಿ ನೋಡುವ ಪರಿ

ಬೇಡವೇ ಬೇಡ ನನಗಿನ್ನು

ಬರೆದರೆ ಕಥೆಯೇ ಬರೆಯಬೇಕು

ಬದುಕ ಬವಣೆಯನು

ನೀಳವಾಗಿ ಸೆರೆ ಹಿಡಿಯಬೇಕು

ಕಾದಂಬರಿ ಬರೆಯುವಷ್ಟು

ಮಣ್ಣು,ಮಸಿ ನನ್ನ ಲೇಖನಿಯಲಿಲ್ಲ

ಸಣ್ಣ ಕಥೆಯೇ ಸರಿಯೆಂದು

ಪೆನ್ನು ಹಿಡಿದು ಕೂತೆ

ಮಾಸ್ತಿ,ಕಾಯ್ಕಿಣಿ,ಚಿತ್ತಾಲರಂತೆ

ನಾನೂ ಮಾಗಬೆಕೆಂದು

ಮೋಂಡು ಕುಳಿತೆ

ಮತ್ತದೇ ಕನಸು;

ಎನಂದಿನಂತೆ ತಡವಾಗಿ ಬಂದ

ಪ್ಯಾಸೆಂಜರ್ ಟ್ರೈನು,

ಕುಳಿ ಬಿದ್ದ ಕಪ್ಪು ರಸ್ತೆ

ಬಿರ್ರನೆ ತಿರುಗುವ

ಗಡಿಯಾರದ ಮುಳ್ಳು

ಆಸ್ಪತ್ರೆಯ ಘಾಟು

ಬೋಧೀ ವೃಕ್ಷದ ನೆರಳು

ಎಚ್ಚೆತ್ತು ನೋಡಲು

ಖಾಲಿ ಹಾಳೆಯ ಮೇಲೆ

ಮತ್ತೊಂದು ಕವಿತೆ!

No comments: