Wednesday, April 15, 2009

ಮೌನರಾಗ


ಮೊನ್ನೆ ಸಿಕ್ಕ ಗೆಳತಿ

ಕವಿತೆಯೊಂದ ಹೆಕ್ಕಿ

ಹಾಡಲು ನಾಚಿ ಮೌನವಾದಳು

ಮೌನರಾಗ ಎನಿತು ಇಂಪು!!!

Thursday, April 9, 2009

ಪ್ರತಿಫಲನ

ಮುಂಜಾನೆಯ ಇಬ್ಬನಿ
ಕಣ್ಣಂಚಿನ ಕಂಬನಿ
ಕಣ್ಣೇರಿಗೆ ಕಾರಣಗಳೆಷ್ಟು?


ನಿರೀಕ್ಶೆಯ ಹೊಸ ಕಿರಣ
ಪ್ರತಿಫಲಿತ ಸಪ್ತವರ್ಣ
ಕನಸಿಗೆ ಬಣ್ಣಗಳೆಷ್ಟು?


ಒಡೆದ ಕನ್ನಡಿಯಲ್ಲಿ ಅದೇ ರೂಪ
ಮತ್ತದೇ ಕನಸಿನ ಪ್ರತಿಫಲನ...

Wednesday, March 18, 2009

ಚೆಲುವಿಗೆ

ಈ ಭುವಿಯೊಳು ಬೇರೇನಿದೆ ನಲ್ಲೆ
ನಿನ್ನ ಚೆಲುವಲ್ಲದೇ..

ಸಂಜೆ ಬಾನ ಹೊನ್ನ ಬಣ್ಣ
ನಲ್ಲೆ ನೀನು ನಾಚಿಯೇ..

ಕೊಗಿಲೇಯ ಗಾನದಿಂಪು
ನಿನ್ನ ಉಸಿರ ರಾಗವೇ

ಮೊಗ್ಗು ಅರಳಿ ಹೂವಾಗಿಹುದು
ನಿನ್ನ ನಗುವ ಕಂಡೊಡೆ

ಇರುಳ ಬಾನ ಮಿನುಗು ತಾರೆ
ಹೊಳೆಯುತಿಹುದು ಕಣ್ಣಲೇ

ಪೂರ್ಣ ಶಶಿಯು ಬೀಗುತಿಹನು
ನಿನ್ನ ಮೊಗದ ಹೊಳಪಲೇ

ಕವಿಯ ಎದೆಯ ಸ್ಪೂರ್ತಿ ಚಿಲುಮೆ
ಗೆಳತಿ ನಿನ್ನ ಚೆಲುವಲೇ...

Wednesday, February 11, 2009

ಗೋಧೂಳಿ

ಮೊಳಗಿದೆ ಚೆಂಡೆ ನಾದ
ಚಿಮ್ಮಿದೆ ಕಾರಂಜಿ.
ಗದ್ದೆಯ ಕೆಸರು ನೀರ
ಕೆಂಬಣ್ಣ ಹೊಳೆಯುತ್ತಿದೆ
ಹೊಸತಾಗಿ,ಹಸನಾಗಿ..

ನೊಗವನೆತ್ತಿ ನಗುವಾಗ
ಬಯಲಲ್ಲಿ ಉಳುವಾಗ
ಪುಣ್ಯಕೋಟಿ ಲವಕುಶರು
ಚೆಂಡೆಯ ಸದ್ದಿಗೇಕೋ
ಬೆದರುತ್ತಾರೆ,
ಓಡುತ್ತಾರೆ ಕೈ ತಪ್ಪಿಸಿ
ಅತ್ತಿತ್ತ ತಿರುಗದೆ
ನೆರವಾಗಿ.
ನನಗೂ ಆವೇಶ,
ಹಿಂದೆಯೇ ನುಗ್ಗುತ್ತೇನೆ
ಕೈಯೆತ್ತಿ..

ಜಾರಿಹೋಗಿದೆ ನೊಗವು
ಬರಡಾಗಿದೆ ಹೊಲವು
ಒಣ ನೆಲದ ಮೇಲೆ
ಬ್ರಹ್ಮಾಂಡದಗಲ
ಗೊರಸ ಗುರುತು.
ಇನ್ನು ಹಿಂತಿರುಗಲೇ ಬೇಕು
ಗೋಧೂಳಿಯ
ಹಣೆಗೆ ಹಚ್ಚಿ.

(ಸೌಂದರ್ಯ ಮತ್ತು ಸತ್ಯ" ಕಂಬಳದ ಬಗೆಗಿನ ಟೆಲಿ ಫಿಲ್ಮ್ ನೋಡಿದಾಗ ಮೋಡಿದ್ದು.)

Saturday, January 17, 2009

ಆಗಸಕೆ ಬಣ್ಣ ಕೊಟ್ಟವನ್ಯಾರೋ?

ಆಗಸಕೆ ಬಣ್ಣ ಕೊಟ್ಟವನ್ಯಾರೋ?
ನೀನ್ಯಾರೋ ಹೇಳು?

ಸಪ್ತವರ್ಣದ ಕನಸು ಕಟ್ಟಿ
ನೀಲಿ ನಭದ ಮೇಲೆ ಹಾರೋ
ಕನಸುಗಾರ ನೀನ್ಯಾರೋ?

ಕಡಲತೆರೆಯ ಮೇಲೆ ಏರಿ
ದಡದ ಮರಳ ಹೊನ್ನ ಮಾಡಿದ
ಸ್ಪರ್ಶಮಣಿ ನೀನ್ಯರೋ?

ಕಲ್ಲುಮಣ್ಣ ರಾಶಿ ಮಾಡಿ
ದಟ್ಟ ಹಸಿರ ಉಸಿರು ತುಂಬಿದ
ಮಾಯಾಶಿಲ್ಪಿ ನೀನ್ಯಾರೋ?

ನನ್ನ ನಿನ್ನ ಭುಮಿಯಲ್ಲಿಟ್ಟು
ಆಗಸದಿ ಶಶಿಯನಿಟ್ಟು
ಬೆಳಕ ಕೊಟ್ಟವನ್ಯಾರೋ?

ನೀನ್ಯಾರೋ ಹೇಳು?
ಆಗಸಕೆ ಬಣ್ಣ ಕೊಟ್ಟವನ್ಯಾರೋ?

Saturday, November 29, 2008

ನದಿ ಮತ್ತು ನೆನಪು





ಜಿಟಿ ಜಿಟಿ ಮಳೆ

ರಸ್ತೆಯೆಲ್ಲಾ ಕೆಸರು ಕೊಚ್ಚೆ

ಮನಸ್ಸೆಲ್ಲಾ ರಾಡಿ

ಯರೋ ಹೇಳಿದ ನೆನಪು

ನದಿಗೆ ನೆನಪಿನ

ಹಂಗಿಲ್ಲವಂತೆ

ಮಳೆಗಾಲದಲ್ಲಿ ತುಂಬಿದ

ಹರಿವು ನದಿಗೆ

ನೋವು ನಲಿವೆಲ್ಲಾ ಒಂದೇ



ಸೆಳೆವಲ್ಲಿ ಕೊಚ್ಚಿ ಹೋದ

ಕನಸುಗಳು ಇನ್ನೂ

ಕನಸುಗಳಾಗಿಯೇ ಉಳಿದಿವೆ



ಸುಳಿಗೆ ಸಿಕ್ಕಿ ಮುಳುಗಿದ

ಮನಸುಗಳು

ಯಾರ ಲೆಕ್ಕಕ್ಕೂ ಸಿಕ್ಕಿಲ್ಲ



ನೆನಹುಗಳಿಂದ ತೊಯ್ದ

ತಟಗಳಲ್ಲಿ ಇನ್ನೂ

ಯರೋ ಕುಳಿತಿರುವಂತೆ..




ನಿಜ, ನದಿಗೆ ನೆನಪಿನ

ಹಂಗಿಲ್ಲ, ಆದರೆ;

ನನಗೂ ನಿನಗೂ ಇದೆ.



ಕಡಲ ಸೇರಿ ಸಿಹಿ ನೀರು

ಉಪ್ಪದಾರೂ, ಮುಪ್ಪಾದರೂ

ನೆನಪು ಚಿರಂಜೀವಿ



ನೆನೆವ ಮನದಲ್ಲಿ

ಮುಚ್ಚಿದ ರೆಪ್ಪೆಗಳೆಡೆಯಲ್ಲಿ

ನದಿ ಹರಿಯುತ್ತಲೇ ಇದೆ.



ನದಿಗೆ ನೆನಪಿನ ಹಂಗಿಲ್ಲ, ನಿಜ

ಆದರೆ...



Wednesday, November 5, 2008

ಜೀವ ರಸಾಯನ ಶಾಸ್ತ್ರ ವಿಭಾಗದಿಂದ


ಊರಿಂದ ದೂರ, ಬೆಟ್ಟದ ಮೇಲೆ

ನಮ್ಮ ಜೀವ ರಸಾಯನ ಶಾಸ್ತ್ರ ವಿಭಾಗ

ಬುಡವಿಲ್ಲ, ತುದಿಯಿಲ್ಲ

ಕಟ್ಟಿದ್ದು ಯಾರೋ ಸರಿಯಾಗಿ ಗೊತ್ತಿಲ್ಲ!


ಪ್ರಯೋಗ ಶಾಲೆಯ ಮುಲೆ ಮುಲೆಗಳೊಳಗೆ

ಸಹಬಾಳ್ವೆ ನಡೆಸುತ್ತಿರುವ

ಹಳೆಯ ಶತಮಾನಗಳಿನ್ನೂ

ಉಸಿರಾಡುತ್ತಿವೆ


ಒಮ್ಮೆ ಹೊಕ್ಕಿರೆಂದರೆ

ಆ ಸರಳುಗಳಿನಂದಾಚೆ

ಹೊಸತೊಂದು ಆಯಾಮ

ಅನಾವರಣಗೊಳ್ಳುವ ಬದುಕು

ನಿಜಕ್ಕೂ ವಾಸ್ತವವೊಂದು ಒಗಟು


ಎಲ್ಲೋ ಕಾಡಲ್ಲಿ

ಬಂಡೆಗಳ ಮೇಲೆ ಬೆಳೆದ

ಬಾನ್ಸಾಯಿಗಳೆಲ್ಲಾ

ಇಲ್ಲಿ ತಳವೂರಿ ಹೆಮ್ಮರಗಳಾಗಿ

ಆಗಸಕೆ ಚಾಚಿವೆ.


ಅವರಂತಾಗುವ ಆಸೆ ನಮಗೂ

ಆದರೆ, ಅಪರಿಚತೆಯ

ನೀರವ ಮೌನ ಕೆಣಕುತ್ತದೆ

ಅರಿಯದಕ್ಕೆ ಅಂಜುವುದೇ

ಮಾನವ ಗುಣ


ಎಷ್ಟು ಅಂಕು ಡೊಂಕಾಗಿ

ದಾರಿ ತಪ್ಪಿಸಿ ನಡೆದರೂ

ಬೆನ್ನಟ್ಟುತ್ತದೆ

ಕಣ್ಣಿನಂಚಿಂದಲೇ

ಕೆಣಕುತ್ತದೆ

ಮನದ ತಿಳಿಕೊಳವನ್ನು

ಕದಡುತ್ತದೆ.


ಇನ್ನು ಮೇಲಲ್ಲಿಗೆ

ಹೊಗುವುದೇ ಇಲ್ಲವೆಂದುಷ್ಟೋ ಬಾರಿ

ಅಂದುಕೊಳ್ಳುತ್ತೇನೆ


ಆದರೇನು?!


ಭಯವ ಗೆಲ್ಲುವ ತವಕ

ಅಂಜಿಕೆಯನ್ನೇರಿ ಸಾಗುತ್ತದೆ

ಅದ ಗೆದ್ದಾಗಲೇ ಸತ್ಯದ

ಹೊಸತೊಂದು ಮಜಲು

ಕಾಣುತ್ತದೆ


ಮಸುಕಾದ ಹಾದಿಯಲ್ಲಿ

ಜಾರಿದಾಗ ಬೀಳದಂತೆ

ಹಿಡಿಡೆತ್ತಲುಎಷ್ಟೊಂದು ಕೈಗಳು


ನಗುವ ಹೂಗಳು

ಹಾಡುವ ಗೀತೆಯ ನಾದಕ್ಕೆ

ನಾವೂ ಅರಳಬೇಕು

ಮುಂದೆ ಅವರ ಜಾಗಕ್ಕೆ ನಾವೂ

ನಮ್ಮ ಜಾಗಕ್ಕೆ ಇನ್ಯಾರೋ....

ಬದುಕು ಹಿಗೇ ಸಾಗಬೇಕು.