Saturday, October 18, 2008

ಹಾಡು ಹಕ್ಕಿ

ಇಂದೇಕೆ ಮೌನ ಹಾಡು ಹಕ್ಕಿ
ಮರೆತೆಯೇನು ಹಾಡನು?!
ಭಾವ ತುಂಬಿ ಬರೆದ ಕವಿಯ
ಎದೆಯ ಮಿಡಿತದ ಸಾಲನು

ನಿನ್ನ ದಿವ್ಯ ಮೌನದೊಡನೆ
ಮರೆಯಾಯ್ತು ಎಲ್ಲಾ ರಾಗವು
ಮುಡದಾಯಿತು ಕವಿತೆಯು
ನಾದವಿರದ ಅನಾಥ ಜಗವು
ನಿನ್ನ ದನಿಗೆ ಕಾದಿದೆ

ಬಿಟ್ಟು ಬಾರೆ ಭಯದ ಗೂಡ
ರೆಕ್ಕೆ ಬಿಚ್ಚಿ ಹಾರು ಬಾ
ಸಹ್ಯಾದ್ರಿ ಸಾಲ ಹಸಿರಿನಲ್ಲಿ
ನಿನ್ನ ಉಸಿರ ಸೇರಿಸಿ
ಏರಿಳಿತದ ಪ್ರಕೃತಿಗೊಂದು
ರಾಗಹಚ್ಚಿ ಹಾಡು ಬಾ

ಅಭಿಮಾನಿ ಹೃದಯ ನಿನಗೆ
ಹಲವು ಕಾತರದಿ ಕಾದಿವೆ
ಕರುಣೆ ತೋರಿ ಬರಡು ಮನಕೆ
ಗಾನಸುಧೆಯ ಹರಿಸು ಬಾ
ನಮಗಾಗಿ ಒಮ್ಮೆ ಹಾಡು ಬಾ.

Saturday, October 4, 2008

ಸಂಕೋಲೆ



ಭಾವನೆಗಳ ಗರಿಗೆದರಿ

ಮುಕ್ತತೆಯ ಮತ್ತೇರಿ

ಕನಸಿನ ಬೆನ್ನೇರಿ

ಹಾರಲು ಸಿದ್ದ


ಮತ್ತೇನೋ ಸೆಳೆತ

ನೆನಪಿನ ಬೇರು

ಭೂಮಿಗೆ ಬಂದಿತ

ಕರ್ತವ್ಯಕೆ ಅಂಜುವೆಯೇಕೆ?


ಏಕಾಂತವು ತೇಲುವ ಮೇಘ

ದು:ಖವು ಕರಗುವ ಆವಿ

ಮಿಂಚಿ ಗುಡುಗುವ ಬುದ್ದಿ

ಕಣ್ಣೀರ ಹನಿಮಳೆ

ಕಡಲ ಸೇರುವ ದಿನವೆಂದೋ?!


ಸ್ವಾತಂತ್ರ್ಯ ಮಾರುತದಿ

ತೇಲುವ ಮನ, ತಡೆ ಅರೆ ಕ್ಷಣ

ಮಣ್ಣಿನ ವಾಸನೆಯ ಮರೆಯುವುದೆಂತು?


ಪ್ರೀತಿ, ವಾತ್ಸಲ್ಯ,ಬಾಂದವ್ಯ,ಜವಾಬ್ದಾರಿ, ವಿಶ್ವಾಸ

ಬಾವನೆಗಳೇ ಕೊಂಡಿಗಳು

ಹುಚ್ಚು ಮನಸ್ಸಿಗೆ ತೊಡರುವ ಸಂಕೋಲೆಗೆ.

Saturday, August 16, 2008

ಊರ್ಧ್ವಮುಖಿ

ಭುವಿಯನ್ನೂ ಬಾನನ್ನೂ
ಬೆಸೆಯುವಂತೆ
ಬಯಲಲೊಂದು
ಒಂಟಿ ಮರ.

ಟಿಸಿಲೊಡೆದ ಒಣ ರೆಂಬೆಗಳು
ಮೋಡದೊಳಗೇ ಇಳಿದು
ನೀರ ಹೀರುತಿವೆಯೆನೋ
ಭೂಮಿ ಭರಡಾದರೆ
ಇನ್ನೇನು ಮಾಡೀತು ಪಾಪ! !

ನೆಲದೊಳಗಿನ ಬೇರು
ಗತಕಾಲವನ್ನೆಲ್ಲಾ
ತಡವಿ, ಎಡವಿ
ಒಳಗಿನ ಲವಾರಸಕ್ಕೆ
ಕರಟಿ ಹೋಗಿದೆ

ನೀರ ಅರಸುವ ಭರದಲ್ಲಿ,
ಮಣ್ಣ ಹೆಂಟೆಯ ಒಳಗಿನ
ಬೆಂಕಿಯ ಭಯದಲ್ಲಿ,
ಬೇರ ಮರೆತೇ ಬಿಟ್ಟಿದೆ.

ಜನರೂ ಅಷ್ಟೇ
ಅದ ಕಂಡಾಗೆಲ್ಲಾ
ಶೀರ್ಷಾಸನ ಹಾಕಿ
ಆ ಮರದಂತೆ ನಾವೂ
ಭೂಮಿಯನ್ನು
ಹಿಡಿದಿಟ್ಟಿದ್ದೇವೆ
ಅನ್ನುತ್ತಾರೆ.

Friday, August 1, 2008

ಕತ್ತಲ ಮೇಲೆ

ಭುವಿಯು ರೆಪ್ಪೆ ಮುಚ್ಚಿದ ವೇಳೆ
ಬೆಳಕು ಬತ್ತಲಾಗಿ
ಕತ್ತಲಾಗಿದೆ ನೋಡು


ಬದುಕು ಬಳುಕುವ ವೇಳೆ
ಉಸಿರ ತುಡಿತಕ್ಕೊಂದು
ಪದವ ಹಿಡಿದು


ನಿನ್ನೆ-ನಾಳೆಗಳ ಜೊತೆಗೆ ಹೆಣೆದು
ಇಂದಿಗೊಂದಿಷ್ಟು ಇಂಬುಕೊಟ್ಟು
ವರ್ತಮಾನದ ಸಾಲು ಬರೆದು


ಗಡಿಯಾರದ ಮುಳ್ಳು ಕಿತ್ತು
ಸಮಯದಲದ್ದಿ, ಬದುಕಿಗೊಂದು
ಭಾಷ್ಯ ಬರೆದಿರಲು


ಮಬ್ಭುಗತ್ತಲ ಬಾಳ ಮೇಲೆ
ಬೆಳಕಿನಿಂದಲೇ ಒಂದು
ಕವಿತೆ ಮುಡಿತು ನೋಡು.

Wednesday, July 9, 2008

ಮತ್ತೆ ಮಳೆ ಹೊಯ್ಯುತಿದೆ..


ಮತ್ತೆ ಮಳೆ ಹೊಯ್ಯುತಿದೆ

ಕೈಗೆಟಕದ ಆಗಸದ ಅಂಚಲಿ

ಕಾಮನಬಿಲ್ಲು ಮುಡುತಿದೆ


ಕೆಸರ ಮೆತ್ತಿದ ಮಣ್ಣ ರಸ್ತೆ

ಹೆಜ್ಜೆ ಗುರುತ ಮರೆಸಿದೆ

ಮನದ ನೋವ ಕಲಸಿದೆ


ಕಣ್ಣಂಚಿನ ಕಟ್ಟೆ ಒಡೆಯೆ

ಕೆಲ ಹನಿಗಳು ಕಾದಿವೆ

ಮತ್ತೆ ಮಳೆ ಹೊಯ್ಯುತ್ತಿದೆ..


ಊರ ನದಿಯ ತಟದ ಬಂಡೆ

ಕಾಣದಂತೆ ಮುಳುಗಿದೆ

ನಿನ್ನ ನೆನಪ ಮರೆಸಿದೆ


ಮಳೆ ಹನಿಯ ತಂತುರು ನಾದಕೆ

ನೆನಪು ಎಕೋ ಕೆರಳಿದೆ

ಮತ್ತೆ ಹೂವು ಅರಳಿದೆ


ಎದೆಯೊಳಗಿನ ನೋವ ಮಡುವು

ದುಮ್ಮಿಕ್ಕಿ ಇಂದು ಹರಿದಿದೆ

ಮತ್ತೆ ಮಳೆ ಹೊಯ್ಯುತ್ತಿದೆ...

Wednesday, June 18, 2008

ಪೌರ್ಣಿಮೆ


ನಿನ್ನ ನಗುವಂತೆ

ಈ ಬೆಳದಿಂಗಳು

ಸಾಗರದ ಅಲೆಗಳಂತೆ

ನನ್ನ ಕವನಗಳು

ಪೌರ್ಣಿಮೆಯ ರಾತ್ರಿಯಲಿ

ನಿನ್ನ ನೆನಪಾಗಿರಲು

ಚಂದ್ರನನ್ನೇ ಮುತ್ತಿಕ್ಕುತ್ತವೆ

ಕಡಲ ಅಲೆಗಳು

ಗುಟ್ಟು

ಸೂರ್ಯಾಸ್ತದ ಹೊತ್ತು
ಇನಿಯನ ಮುತ್ತಿಗೆ
ಕೆಂಪಾಗಿತ್ತು ಮುಗಿಲು
ಮೋಡಗಳ ನಡುವೆ
ಮಿಂಚಿ ಮರೆಯಾದ ನೇಸರ,
ಇಣುಕಿದ್ದ ಶಶಿ
ನಮ್ಮ ಗುಟ್ಟು ರಟ್ಟಯಿತೀಗ
ನಕ್ಷತ್ರ ಲೊಕದಲೆಲ್ಲಾ
ನಮ್ಮ ಪ್ರೆಮದ್ದೇ ಚರ್ಚೆ.